
- ಸರ್ಕಾರದ ಪರ ಎಎಸ್‌ಜಿ ಶಂಕರ್‌ನಾರಾಯಣನ್ ವಾದ
- ಏಪ್ರಿಲ್ 10ಕ್ಕೆ ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್
ಟ್ವಿಟರ್ ಒಂದು ವಿದೇಶಿ ಸಂಸ್ಥೆಯಾಗಿರುವುದರಿಂದ ಸರ್ಕಾರ ಹೊರಡಿಸಿರುವ ನಿರ್ಬಂಧದ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಪ್ರಕರಣದಲ್ಲಿ ಯಾವುದೇ ಪರಿಹಾರ ಪಡೆಯುವ ಅರ್ಹತೆ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಗುರುವಾರ (ಮಾರ್ಚ್ 16) ಪುನರುಚ್ಛರಿಸಿದೆ.
ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಆರ್ ಶಂಕರ್‌ನಾರಾಯಣನ್, ಪ್ರಕರಣದ ಆರಂಭಿಕ ವಿಚಾರಣೆ ವೇಳೆ ಮಂಡಿಸಿದ ವಾದವನ್ನು ಪುನರುಚ್ಛರಿಸಿದರು.
ಟ್ವಿಟರ್ ಒಂದು ವಿದೇಶಿ ಸಂಸ್ಥೆಯಾಗಿದೆ. ಆದ್ದರಿಂದ ಅದು ಭಾರತದ ಸಂವಿಧಾನದಡಿಯಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಉಲ್ಲೇಖಿಸಿ ಪರಿಹಾರ ಪಡೆಯಲು ಸಾಧ್ಯವಿಲ್ಲ. ಸಂಬಂಧಿತ ಶಾಸನದ ಅನುಪಸ್ಥಿತಿಯಲ್ಲಿ ಅದು ಖಾತೆದಾರರ ಹಕ್ಕುಗಳನ್ನು ಉತ್ತೇಜಿಸಲು ಸಾಧ್ಯವಿಲ್ಲ ಎಂದು ಶಂಕರ್‌ನಾರಾಯಣನ್ ಅವರು ಕೇಂದ್ರ ಸರ್ಕಾರದ ಪ್ರಮಾಣಪತ್ರ ಸಲ್ಲಿಸಿದರು.
ಈ ಹಿಂದೆ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸುವ ಕುರಿತ ಅನುರಾಧ ಭಾಸಿನ್ ಮತ್ತು ಭಾರತ ಸರ್ಕಾರ ನಡುವಿನ ಪ್ರಕರಣವನ್ನು ಎಎಸ್‌ಜಿ ಉಲ್ಲೇಖಿಸಿದರು.
ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಅಂತರ್ಜಾಲವನ್ನು ಸಂಪೂರ್ಣವಾಗಿ ಮರುಸ್ಥಾಪಿಸುವ ಅರ್ಜಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಅವರು ತಿಳಿಸಿದರು.
ಜನರು ಒಂದೇ ವೇದಿಕೆಗೆ ಸೇರುವುದು ಸರಿಯಾಗಿದೆ. ಆದರೆ ರಾಷ್ಟ್ರೀಯ ಸಮಗ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ಬಂದರೆ ಸಮಸ್ಯೆಯಾಗುತ್ತದೆ ಎಂದು ಶಂಕರ್‌ನಾರಾಯಣನ್ ಉಲ್ಲೇಖಿಸಿದರು.
ಬಳಕೆದಾರರ ಗುರುತಿನ ಪ್ರಾಮುಖ್ಯತೆಯನ್ನು ಸೂಚಿಸಲು ಫೇಸ್‌ಬುಕ್ ಬಳಕೆಗಾಗಿ ಆಧಾರ್ ಕಾರ್ಡ್‌ಗಳನ್ನು ಜೋಡಿಸಲು ಕೋರಿದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿರುವುದನ್ನು ಶಂಕರ್‌ನಾರಾಯಣ್ ಪ್ರಸ್ತಾಪಿಸಿದರು.
2009ರ ಮಾಹಿತಿ ತಂತ್ರಜ್ಞಾನದ (ನಿರ್ಬಂಧ ನಿಯಮಗಳು) 16ನೇ ನಿಯಮ ಪಾಲಿಸುವಲ್ಲಿ ಟ್ವಿಟರ್ ಹಿಂದೆ ಉಳಿದಿದೆ ಎಂದು ಶಂಕರ್‌ನಾರಾಯಣ್ ವಾದಿಸಿದರು.
ಈ ಸುದ್ದಿ ಓದಿದ್ದೀರಾ? ಲೋಕಸಭೆಯಲ್ಲಿ ಮೈಕ್ ದನಿ ಕಡಿತ; ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ನೋಟಿಸ್
ವಾದವನ್ನು ಆಲಿಸಿದ ನಂತರ ಹೈಕೋರ್ಟ್, ಪ್ರಕರಣದಲ್ಲಿ ಸಲ್ಲಿಸಿರುವ ಸಲ್ಲಿಕೆಗಳ ನವೀಕರಣದ ಪ್ರತಿ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿತು. ವಿಚಾರಣೆ ಏಪ್ರಿಲ್ 10ಕ್ಕೆ ಮುಂದೂಡಲಾಯಿತು.