Technical Issue

ಸಾಮಾಜಿಕ ಮಾಧ್ಯಮಗಳಲ್ಲಿ ನಿರ್ಬಂಧ ತೆರವು; ‘ಐ ಆಮ್ ಬ್ಯಾಕ್’ ಎಂದ ಡೊನಾಲ್ಡ್ ಟ್ರಂಪ್

Donald trump
  • 2021, ಜನವರಿ 6ರಂದು ಪ್ರಚೋದನೆ ನೀಡುವಂತಹ ಪೋಸ್ಟ್ ಹಾಕಿದ್ದ ಕಾರಣಕ್ಕೆ ನಿರ್ಬಂಧ
  • 2021ರ ಅಂತ್ಯದ ವೇಳೆಗೆ ಟ್ರೂತ್ ಸೋಶಿಯಲ್ ಎಂಬ ಹೊಸ ವೇದಿಕೆ ಸ್ಥಾಪನೆ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೂಟ್ಯೂಬ್ ಹಾಗೂ ಫೇಸ್ಬುಕ್ಗಳ ಖಾತೆಗಳ ಮೇಲೆ ಇದ್ದಂತಹ ನಿರ್ಬಂಧವನ್ನು 2 ವರ್ಷಗಳ ನಂತರ ತೆರವುಗೊಳಿಸಲಾಗಿದೆ. ಖಾತೆಗಳು ಮರಳಿ ಬಂದಿರುವುದಕ್ಕೆ  ಸಂತಸ ವ್ಯಕ್ತಪಡಿಸಿ ಮೊದಲ ಪೋಸ್ಟ್ ಹಾಕಿರುವ ಟ್ರಂಪ್ ‘ಐ ಆಮ್ ಬ್ಯಾಕ್’ ಎಂದು ಬರೆದುಕೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಹಿನ್ನಲೆಯಲ್ಲಿ 2021ರ ಜನವರಿ 6ರಂದು ಟ್ರಂಪ್ ಬೆಂಬಲಿಗರು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ನೆಡಸಿದ್ದರು. ಈ ಹಿಂಸಾಚಾರಕ್ಕೆ ಟ್ರಂಪ್ ಪ್ರಚೋದನೆ ನೀಡುವಂತಹ ಪೋಸ್ಟ್ಗಳನ್ನು ಹಾಕಿದ್ದ ಕಾರಣಕ್ಕಾಗಿ ಅವರ ಯೂಟ್ಯೂಬ್ ಹಾಗೂ ಫೇಸ್ಬುಕ್ ಖಾತೆಗಳನ್ನು ನಿರ್ಬಂಧಿಸಲಾಗಿತ್ತು. ಇದೀಗ 2 ವರ್ಷಗಳ ಬಳಿಕ ಅವರ ಖಾತೆಗಳನ್ನು ಮರು ಸ್ಥಾಪಿಸಲಾಗಿದೆ.

ಫೇಸ್ಬುಕ್ ಹಾಗೂ ಯೂಟ್ಯೂಬ್‌ಗೆ ಮರಳಿ ಬಂದ ತಕ್ಷಣ ಡೊನಾಲ್ಡ್ ಟ್ರಂಪ್ ಶುಕ್ರವಾರ ಪೋಸ್ಟ್ ಒಂದನ್ನು ಹಾಕಿ, ‘ಐ ಆಮ್ ಬ್ಯಾಕ್’ (ನಾನು ಮರಳಿ ಬಂದಿದ್ದೇನೆ) ಎಂದು ಬರೆದಿದ್ದಾರೆ. ಮಾತ್ರವಲ್ಲದೇ ಇಲ್ಲಿಯವರೆಗೆ ನಿಮ್ಮನ್ನು ಕಾಯಿಸಿರುವುದಕ್ಕೆ ಕ್ಷಮಿಸಿ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಟ್ವಿಟರ್‌ ಯಾವುದೇ ಪರಿಹಾರಕ್ಕೆ ಅರ್ಹವಲ್ಲ; ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ ಹೇಳಿಕೆ

ಟ್ರಂಪ್‌ಗೆ ಫೇಸ್‌ಬುಕ್‌ನಲ್ಲಿ 3.5 ಕೋಟಿ ಹಿಂಬಾಲಕರಿದ್ದರೆ, ಯೂಟ್ಯೂಬ್‌ನಲ್ಲಿ 2.5 ಕೋಟಿ ಚಂದಾದಾರರಿದ್ದಾರೆ. ಯೂಟ್ಯೂಬ್ ಶುಕ್ರವಾರ ಟ್ರಂಪ್ ಅವರ ಚಾನಲ್‌ಅನ್ನು ಮರಳಿಸಿದ್ದು, ಮೆಟಾ ಪ್ಲಾಟ್ಫಾರ್ಮ್ ಈ ವರ್ಷದ ಆರಂಭದಲ್ಲಿ ಇನ್ಸ್ಟಾಗ್ರಾಮ್ ಖಾತೆಗಳನ್ನು ಮರಳಿಸಿದೆ.

ಟ್ವಿಟ್ಟರ್‌ಅನ್ನು ಖರೀದಿಸಿದ ಇಲಾನ್ ಮಸ್ಕ್ ಕಳೆದ ವರ್ಷ ನವೆಂಬರ್‌ನಲ್ಲಿಯೇ ಟ್ರಂಪ್ ಅವರ ಖಾತೆಯನ್ನು ಮರಳಿಸಿದ್ದರು. ಆದರೆ ಅವರು ಇಲ್ಲಿಯವರೆಗೆ ಟ್ವಿಟ್ಟರ್‌ನಲ್ಲಿ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಂಡಿಲ್ಲ. ಟ್ವಿಟರ್‌ನಲ್ಲಿ ಟ್ರಂಪ್‌ಗೆ 8.04 ಕೋಟಿ ಹಿಂಬಾಲಕರಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ನಿರ್ಬಂಧಗೊಂಡಿದ್ದ ಕಾರಣ ಟ್ರಂಪ್ 2021ರ ಅಂತ್ಯದ ವೇಳೆಗೆ ಟ್ರೂತ್ ಸೋಶಿಯಲ್ ಎಂಬ ತಮ್ಮದೇ ಹೊಸ ವೇದಿಕೆಯನ್ನು ಸ್ಥಾಪಿಸಿದ್ದರು. ಇದನ್ನು ತಮ್ಮ ಬೆಂಬಲಿಗರೊಂದಿಗೆ ಸಂವಹನ ನಡೆಸಲು ಬಳಸುತ್ತಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್